ಸೇಡಂ
	ಭಾರತದ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರದಲ್ಲಿ ಚಿತ್ತಾಪುರ ಮತ್ತು ಚಿಂಚೋಳಿ ತಾಲ್ಲೂಕುಗಳೂ ದಕ್ಷಿಣದಲ್ಲಿ ಯಾದಗಿರಿ, ಪಶ್ಚಿಮದಲ್ಲಿ ಚಿತ್ತಾಪುರ ತಾಲ್ಲೂಕುಗಳೂ ಪೂರ್ವಕ್ಕೆ ಆಂಧ್ರಪ್ರದೇಶವೂ ಈ ತಾಲ್ಲೂಕನ್ನು ಸುತ್ತುವರಿದಿವೆ. ಆಡಕಿ, ಮುಧೋಳ, ಸೇಡಂ ಮತ್ತು ಕೊಡ್ಲ ಹೋಬಳಿಗಳಿದ್ದು ಒಟ್ಟು 111 ಗ್ರಾಮಗಳಿವೆ. ಗುಲ್ಬರ್ಗ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕಿನ ವಿಸ್ತೀರ್ಣ 1,020.5 ಚ.ಕಿಮೀ. ಜನಸಂಖ್ಯೆ 1,96,087. 

	ಈ ತಾಲ್ಲೂಕಿನ ಕೆಲವು ಭಾಗಗಳು ಜಿಲ್ಲೆಯ ಎಲ್ಲ ಭಾಗಗಳಿಗಿಂತ ಎತ್ತರವಾಗಿದ್ದು ಕೆಲವು ಸಣ್ಣ ಬೆಟ್ಟಗುಡ್ಡಗಳಿಂದ ಕೂಡಿದೆ. ಕಾಗಿಣಾ ಈ ತಾಲ್ಲೂಕಿನ ಮುಖ್ಯನದಿ. ಈ ನದಿ ತಾಲ್ಲೂಕಿನ ಉತ್ತರದಲ್ಲಿ ಲೊಹಾದ್ ಗ್ರಾಮದ ಪೂರ್ವದಲ್ಲಿ ಈ ತಾಲ್ಲೂಕನ್ನು ಪ್ರವೇಶಿಸಿ ಪಶ್ಚಿಮಾಭಿಮುಖವಾಗಿ ಹರಿಯುವುದು. ಮಳಖೇಡ ಗ್ರಾಮದ ಪಶ್ಚಿಮದಲ್ಲಿ ಈ ತಾಲ್ಲೂಕನ್ನು ಬಿಟ್ಟು ಚಿತ್ತಾಪುರ ತಾಲ್ಲೂಕನ್ನು ಪ್ರವೇಶಿಸಿ ಹುನಗುಂಟ ಗ್ರಾಮದ ಬಳಿ ಭೀಮಾನದಿಯನ್ನು ಸೇರುವುದು. ಈ ನದಿ ತಾಲ್ಲೂಕಿನ ಉತ್ತರ ಭಾಗಕ್ಕೆ ತನ್ನ ಹರಿವಿನ ಉದ್ದಕ್ಕೂ ಜಲಾಧಾರವಾಗಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 884.30 ಮಿಮೀ. 

	ತಾಲ್ಲೂಕಿನ ವ್ಯವಸಾಯಕ್ಕೆ ಬಾವಿ ಕೆರೆಗಳ ಜೊತೆಗೆ ಕಿರಿಯ ರಾಜೋಲಿ ಗ್ರಾಮದ ಬಳಿಯ ಮುಧೋಳ ತೊರೆ ಅಡ್ಡಗಟ್ಟೆ ಯೋಜನೆ ಮತ್ತು ಯಡಹಳ್ಳಿ ಬಳಿಯ ಕಾಗಿಣಾ ನದಿಯ ಅಡ್ಡಗಟ್ಟೆಯೋಜನೆಯಿಂದ ನೀರೊದಗಿಸಿಕೊಳ್ಳಲಾಗುವುದು. ಕಪ್ಪುಮಣ್ಣಿನ ಈ ತಾಲ್ಲೂಕಿನಲ್ಲಿ ಜೋಳ, ಸಜ್ಜೆ, ಗೋದಿ, ತೊಗರಿ, ಕಡಲೆ, ಮೆಣಸಿನಕಾಯಿ, ನೆಲಗಡಲೆ ಮುಂತಾದವನ್ನು ಬೆಳೆಯುತ್ತಾರೆ. ಪಶುಪಾಲನೆಯುಂಟು. 

	ಸೇಡಂಗೆ ವಾಯವ್ಯದಲ್ಲಿ ಸು. 13 ಕಿಮೀ ದೂರದಲ್ಲೂ ಚಿತ್ತಾಪುರಕ್ಕೆ ಈಶಾನ್ಯದಲ್ಲಿ  10 ಕಿಮೀ ದೂರದಲ್ಲೂ ಇರುವ ಮಳಖೇಡ (ನೋಡಿ- ಮಳಖೇಡ) ಕಾಗಿಣಾನದಿಯ ಬಲದಂಡೆಯಲ್ಲಿದೆ. ಇದು ಹಿಂದೆ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಈ ಊರಿಗೆ ಹಿಂದೆ ಮಾನ್ಯಖೇಟಪುರವೆಂಬ ಹೆಸರಿತ್ತು. ಕವಿರಾಜಮಾರ್ಗದ ಕರ್ತೃ ಇಲ್ಲಿಯವನು. ಮಧ್ವಾಚಾರ್ಯರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಜಯತೀರ್ಥರು ಇಲ್ಲಿ ನೆಲೆಸಿದ್ದರು. ಇವರ ಬೃಂದಾವನ ಇಲ್ಲಿದೆ. ಅಪಭ್ರಂಶ ಕವಿ ಎಂದು ಹೆಸರಾದ ಪುಷ್ಪದಂತ ಇದೇ ಊರಿನವನು. ಹಿಂದೆ ಜೈನ ಸಂಸ್ಕøತಿಯ ಕೇಂದ್ರ ವಾಗಿದ್ದ ಮಳಖೇಡ ಈಗ ಒಂದು ಸಾಮಾನ್ಯ ಗ್ರಾಮ. ಈಗಲೂ ಹಿಂದಿನ ಕೋಟೆಕೊತ್ತಲಗಳ ಅವಶೇಷಗಳನ್ನು ಇಲ್ಲಿ ಕಾಣಬಹುದು. 

ಸೇಡಂ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಚಿತ್ತಾಪುರ-ಹೈದರಾಬಾದು ರೈಲ್ವೆ ಮಾರ್ಗದಲ್ಲಿ ಗುಲ್ಬರ್ಗದ ಆಗ್ನೇಯಕ್ಕೆ 56 ಕಿಮೀ ದೂರದಲ್ಲಿದೆ. ಜನಸಂಖ್ಯೆ 40,113. ಇದೊಂದು ವ್ಯಾಪಾರ ಕೇಂದ್ರ. ತಾಲ್ಲೂಕಿನ ಮುಖ್ಯ ರೈಲ್ವೆ ನಿಲ್ದಾಣ. ಈ ಊರಿನಲ್ಲಿರುವ ಜಾಮಿ ಮಸೀದಿ, ಪಂಚಲಿಂಗ ದೇವಸ್ಥಾನ, ಜೈನಮಂದಿರ ಮತ್ತು ಮಾಣಿಕೇಶ್ವರ ದೇವಸ್ಥಾನ ಪ್ರೇಕ್ಷಣೀಯವಾದವು.
						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
						(ಬಿ.)